ಮೌನದ ಮರೆಯಲ್ಲಿ
ಶೀರ್ಷಿಕೆ-ಮೌನದ ಮರೆಯಲ್ಲಿ
********************
ಮನದ ಮಾತುಗಳು ಮೌನದ ಸೆರಗಿನ ಮರೆಯಲಿ
ಸುಳಿವ ನೆನಪುಗಳ ಬೆಸೆದ ಇರುಳು ಬೆಳಕಾಗಿ
ಅರಳಿದ ಒಲವು ಕಂಪು ಸೂಸಲು ಹಿತವಾಗಿ
ಒಲುಮೆಯ ಒರತೆಯು ಹೊಮ್ಮಿದೆ ನವಿರಾಗಿ
ಮನದೊಳಗಿನ ಬಯಕೆಯು ಹೊಳೆವ ಮುತ್ತಂತೆ
ರವಿಯು ಬೆಳಕು ಚೆಲ್ಲಿ ಧರಣಿಯು ಹೊಳಯುವಂತೆ
ಇರುಳ ಶಶಿಯು ಹೂಡಿದ ಹಾಲು ಬೆಳದಿಂಗಳಂತೆ
ಒಲವಿನ ಬೆಳಕ ಹೂಡಿ ರಮಿಸುವೆ ನಿನ್ನ, ಮನದನ್ನೆ
ತಿರುಗಿ ನೋಡು ಒಮ್ಮೆ ಕೊಂಕು ಬಿಂಕವ ತೊರೆದು
ಮಿನುಗು ತಾರೆಗಳ ಹೆಕ್ಕಿ ಹೊಳಪ ಧಾರೆ ಎರೆವೆ
ಕಡಲ ಮುತ್ತುಗಳ ಹೆಕ್ಕಿ ಮುತ್ತಿನ ಮಾಲೆ ಕೊಡುವೆ
ಮೌನ ತೊರೆದು ಮನದ ಮಾತ ಹೇಳು ನನ್ನೊಲವೆ
ಮನದ ಮೆಚ್ಚುಗೆಯು ನೀನು, ಇಚ್ಚೆಗಳ ಬೆಸೆದು
ಹೊಸತು ಬದುಕಿಗೆ ಒಲವ ಮುನ್ನುಡಿಯ ಬರೆದು
ಸನಿಹವಾಗು ಹೃದಯಕೆ ,ಮೌನ ರೂಪವ ಕಳೆದು
ಒಲವಿನೆದೆಯಲಿ ಸದಾ ನಲಿವ ಒಲುಮೆಯ ತಳೆದು
ಸಿದ್ದು ಮೂರ್ತಿ, ತುಮಕೂರು
Comments
Post a Comment