ಅಂತ್ಯವಲ್ಲ ಆರಂಭ




ಅಂತ್ಯವಲ್ಲ ಆರಂಭ
~~~~~~~~~~
ಬದುಕ ಬುತ್ತಿಯ ಭಾರ ಹೊತ್ತು
ಇಳಿಸಂಜೆಯ ಜೀವಕೆ ನೆನಪಾಗಿ
ನೋವು ಮಾತಾಗದೆ   ಮಡುಗಟ್ಟಿದೆ
ಮೌನ ಮುಸಿ ನಕ್ಕು ಮರೆಯಾಗಿದೆ

ಬೊಗಸೆಯಲಿ ಬಚ್ಚಿಟ್ಟ ಕಾಳಜಿ
ಹೊಸತನ ತಳೆದು ತೊರೆಸಿದೆ..
ಟಿಸಿಲೊಡೆದ ರಂಬೆಗೆ ಅಂಟಿದ್ದ
ಹಣ್ಣೆಲೆ ಅಲ್ಲಲ್ಲಿ ಉದುರುದುರಿ
ಚೆದುರಿವೆ ನೆಲೆಗಾಣದೆ...

ಆಗಿನ್ನೂ ಕುಡಿಗಳ ಆರೈಕೆ
ಬಸಿದ ನೆತ್ತರ ಬೆವರನಿಯ
ಬಡಕಲು ದೇಹವೇ ಕಣ್ಣೊಳಗೆ ಬಚ್ಚಿಟ್ಟು
ನೀರೆರೆದು ಪೋಷಿಸಿತ್ತು
ಹಸನಾಗಿ ಬೆಳೆದು ಸೊಗಸಾದ
ಬದುಕಿನಾಶ್ರಯ ಪಡೆವ ಕನಸೊತ್ತು..

ಉರುಳುರಳಿದ ದಿನಗಳು
ಬದಲಾದ ಋತುಗಳಲ್ಲಿ
ಉದುರಿದೆಲೆಗಳ  ಚಿಗುರಿದೆಲೆಗಳು
ನಗುವ ಹಸನು ಬದುಕ ಹಿಂದೆ
ಬಸವಳಿದ ಶ್ರಮಗಳ ಮರೆತು ..

ಅರಿಯದ ಪ್ರಜ್ಞೆಗಳು ಹಿಂಡಿಂಡು ಸಾಗಿ
ಹಂಡೆಗಟ್ಟಲೆ ಅಭಿಷೇಕ ಸುರಿದ
ಶಿಲೆಗಳೇನು, ಕರಗಿ ವರವಿತ್ತವೇ
ಹತ್ತಿರದ ಹೆತ್ತು ಹೊತ್ತ ಜೀವಗಳ
ಮರೆತು ತೊರೆವವರ ಬದುಕು ಎತ್ತಲಾಗಿ..?

ಬೆಂದು ಸುಕ್ಕಾದರೂ ಅಂಜದ ಎದೆ
ತಳೆದ ಅದಮ್ಯ ಇಚ್ಚೆ,ತೊರೆದಹಂಗು
ಕೈಹಿಡಿದವಳ ಕರಪಿಡಿದು ಸಾಗಿದೆ
ಹೊಸ ಇಂಗಿತದಲಿ ಹೊಸ ಬದುಕ ಆರಂಭಿಸಿ...

ಸಿದ್ದುಮೂರ್ತಿ


Comments

Popular posts from this blog

ಆಧ್ಯಾತ್ಮಿಕ ವಿಚಾರ