ಋಣಾನುಬಂಧ

ಅಮ್ಮನ ತೋಳತೆಕ್ಕೆಯಲಿ
ಚಂದದ ಜೋಗುಳವದು
ಜೀವಕಣವೂ ಅನುರಣಿಸುವುದಿಲ್ಲಿ
ಅಮ್ಮನ ಒಲುಮೆಯ ಚಿಲುಮೆಯಲ್ಲಿ
ಮಿಂದ ಬದುಕು ಪಾವನವೇ ಸರಿ

ಮಮತೆಯೊಡಲ ಆರೈಕೆ ತಣಿಸಿ
ರಮಿಸುವ ಪರಿ ತಂಪು ತುಂತುರು ಹನಿ
ಸಹನೆಯ ಹೊನಲು ಕಂದನ ಅಪ್ಪಿ ಆಲಂಗಿಸಿ
ಅಳುತಿರೆ ಮನಕರಗಿ ನೊಂದ ಭಾವುಕತೆ
ಧರೆಗಿಳಿದ ದೈವ ಜೀವಪೊರೆವ ದೇವತೆ

ಬೆರಳ ಹಿಡಿದು ನಡೆವಾಗ ತಪ್ಪಿದ ಹೆಜ್ಜೆ
ತಿದ್ದಿ ತೀಡಿ ತೋರಿ ನಡೆಸಿದ ಹೆಜ್ಜೆ
ಮನದಲಿ ಅಚ್ಚಾಗಿ ಬದುಕಲ್ಲಿ ಗುರುತಾಗಿ
ಕರುಳ ಕುಡಿಯ ಏಳಿಗೆಗೆ ಬೆಳಕಾಗಿ

ತೊದಲು ನುಡಿಗಳ ತಿದ್ದಿ
ಮೊದಲ ನುಡಿಗಳು ಅರಳಿನಗುವಂತೆ
ಅಮ್ಮನ ಶಾಲೆ ಗರಡಿ ಮನೆಯಂತೆ
ರಮಿಸಿ ತುತ್ತು ಅನ್ನ ತಿನ್ನುವಾಗ
ಅಂಗಳದಿ ಚಂದ್ರಮನೂ ನಲಿವಂತೆ

ನಿನ್ನದೇ ರಕ್ತ ಮಾಂಸ ಹಂಚಿ
ಕರುಳಬಳ್ಳಿಗಂಟಿ ಬೆಳೆದು
ನವಮಾಸಗಳ ನೋವುಂಡು
ನೋವ ಸೆಲೆಯಲ್ಲಿ ನಲಿವುಂಡು
ಮೈದಳೆದ ಜೀವವ ಪೊರೆದು,
ಬಸಿದ ರಕ್ತಎದೆಹಾಲ ಕುಡಿದು
ಬೆಳೆದ ಕರುಳ ಕುಡಿ ನಿನ್ನ  ಋಣಿಯಾಗಿ
-ಸಿದ್ದುಮೂರ್ತಿ


Comments

Popular posts from this blog

ಆಧ್ಯಾತ್ಮಿಕ ವಿಚಾರ