ಬಿಕ್ಕುವ ದನಿ

 

------------------


ಶೀರ್ಷಿಕೆ:ಬಿಕ್ಕುವ ದನಿ

**************



ಬಿಕ್ಕುವ ದನಿ ಮಡುಗಟ್ಟಿದೆ ಮಾತಾಗದೆ

ಎದೆಭಾಷೆಗೆ ದನಿಗೂಡದೆ ಮೌನ ತಾಳಿದೆ

ಮಬ್ಬರಿದು ಬೆಳಕು ಹರಿಯುವ ಮುನ್ನ

ದುರುಳರ ಕ್ರೂರದಂಡಿಗೆ ಪಥನ ಗೊಂಡಿದೆ ಮನ


ಅಮಲು ಏರಿದ  ಕರಗಳ ತೆಕ್ಕೆಯೊಳು

ನಶೆಯ  ಗುಂಗಿನ ಹೊಳಪು 

ನಮ್ಮಬದುಕ ಕನಸುಗಳ ಗದ್ದಗೆಯೇರಿ

ಹೊಂಚು ಆಸೆಗಳೇ  ಗಹಗಹಿಸುತ್ತಿವೆ


ಕನಸುಕಾಣುವ ಮುನ್ನ ಆಸೆಹುಟ್ಟುವ ಮುನ್ನ

ಬದುಕ ಮುನ್ನುಡಿ ಬರೆವ ಹೊತ್ತಿಗೆಯಲ್ಲಿ

ರಕ್ಕಸ ಮನಗಳ ಕ್ರೂರ ಕಾಮನೆಯ ಗೀಚಿ

ಬೆತ್ತಲಾಗಿಸಿದ ನಮ್ಮ ಬದುಕು ಕ್ಷಣದಲಿ ಮರೆಮಾಚಿ


ಮಿಕ್ಕಿ ಮಿಗಿಲಾಗಿ ಉಂಡು ತೇಗುವಕಾಮನೆ

ನಮ್ಮ ಬದುಕ ತುಳಿತದ‌ ಯಾತನೆ

ಉಸಿರಾಡಲು ಮಾತ್ರ ಈ ದೇಹವಂತೆ

ರಕ್ಕಸರ ತುಳಿತಕ್ಕೆ ನಲುಗಲು ಹೇಳಿಮಾಡಿಸಿದಂತೆ


ಅವರ ಅಮಲ ಮೋಜಿನ ಘಮಲಿನಲಿ 

ಬೆವರಹನಿಯ ಕಂಟು ವಾಸನೆಗೆ ಆಸೆ ಕಮರಿ

ಹೆಣ್ಣಾದ ನಮ್ಮೀ ಭವಿಷ್ಯದ  ಬದುಕ  ಕನವು ಕದಡಿ

ಶೋಷಣೆಯ ಹತ್ತಿಕ್ಕಲು ದನಿ ಬಿಕ್ಕುತ್ತಿದೆ..



ಸಿದ್ದು ಮೂರ್ತಿ, ತುಮಕೂರು.

Comments

Popular posts from this blog

ಆಧ್ಯಾತ್ಮಿಕ ವಿಚಾರ