ಕವಿತೆ

 



ಒಲವೇ ಜೀವನ.

-----------------------


ಮೋಹ ಮಮತೆಗಳ ಮಾಯೆಗೆ

ವ್ಯರ್ಥ ಕರ್ಮಗಳ ಸುಳಿಯೊಳಗೆ

ನಲುಗುವ ದಿನಗಳು

ರಾಗ ದ್ವೇಷಗಳ ನಡುವೆ

ಕ್ರೌರ್ಯ ಕರುಣೆಗಳೂ ಜೊತೆಗೆ

ಪ್ರೀತಿ ಸಹನೆಯೊಂದಿಗೆ

ನೋವು ನಲಿವಿನೊಂದಿಗೆ..

ನಮ್ಮದೇ ಬದುಕು..

ಅಂದುಕೊಂಡಂತೆ ಅಲ್ಲ

ನಿರೀಕ್ಷೆಗಳ ದಾಟಿದ

ನಿಗೂಢ ಬಯಲೊಳಗೆ

ಎತ್ತಲೋ ಸಾಗಿದೆ.. ಗೊತ್ತು ಗುರಿ ಇಲ್ಲ



ತಗ್ಗದ ಆಸೆಗಳಿಗೆ ಒಗ್ಗಿದ ಮನವು

ಚಂಚಲ ನೋಟದ ಕಂಗಳಿವು

ತಣಿಯದು,ಮಣಿಯದು

ಬೇಕೆನ್ನುವ ಗೀಳು ಇಳಿಯದು..

ದಕ್ಕದಿದ್ದರೆ ಉಳಿದ ದು:ಖ

ಎದೆಗಿಳಿದ ನೋವಿನ ಭಾರ..

ಮಿತಿಯೊಳಗಿರದ ಆಸೆಗೆ

ತೆರಬೇಕಾದ ಬೆಲೆ  ಸತ್ಯ


ಅಂತರಂಗದ ಚಕ್ಷು ತೆರೆಯಲಿ

ಅರಿವಿನ ಪರಿಧಿಯೊಳಗೆ

ತೆರವಾಗಲಿ ತರವಲ್ಲದವು

ತೆರದ ಮನದಿಂದ ನಡೆ

ಬಯಕೆಗಳಿಗೆ ಬೆನ್ನು ಮಾಡಿ...

ಭ್ರಮೆಯ ಲೋಕದ ಹೊರಗೆ

 ವರ್ತಮಾನದೆಡೆಗೆ...

ನೋವು ನಲಿವಿಗೆ ಹಿಗ್ಗಿ ಕುಗ್ಗಿ 

ಹದಗೊಂಡ ಮನೋಪಾಕ

ಬದುಕಿನ‌ ಸಿಹಿ ಹೂರಣದಂತೆ

ಭಾವ ಅನುಭವಗಳ ಬೆಸೆದ

ಒಲವೇ ಜೀವನ ಸತ್ಯವು.



ಸಿದ್ದು ಮೂರ್ತಿ.


















Comments

Popular posts from this blog

ಆಧ್ಯಾತ್ಮಿಕ ವಿಚಾರ