ಕವಿತೆ
ಉರಿದು ಬೆಳಕಾದವರು...!
ಎದೆಯ ಮಡಕೆಯೊಳಗೆ
ಬೆಚ್ಚನೆಯ ಒಲವಿಗೆ
ಕರಗಿ ಪಾಕವದು ಸಿಹಿ ಅಚ್ಚು.,
ಜೀವವ ಬಸಿದು
ಹಡೆದ ಕುಡಿಗಳಿಗೆ
ನಿತ್ಯ ರಮಿಸಿ ಉಣಿಸಲು..
ಕತ್ತಲಿನ ಭಯಕೆ
ಸುತ್ತಲೂ ಬೆಳಕಾದ ಅಭಯ
ಮಡಿಲು ಮೃದು ಲತೆಯ ಮೆಲು
ಹಾಸಿಗೆ ನಿದಿರೆಗೆಂದೇ..
ಹೆಗಲಿಗೊತ್ತು ನಡೆವ
ಕಲ್ಲು ಮುಳ್ಳುಗಳ ಹಾದಿ.
ಬಿರಿದು ಒಡೆವ ಪಾದಗಳ
ಹನಿ ನೆತ್ತರದ ಕಲೆಗಳಲ್ಲಿ.,
ಅಚ್ಚಾದ ನಮ್ಮಭವಿಷ್ಯದ
ಕುರುಹುಗಳು.
ನಡೆಯಲಾರದವು
ನೋವುಗಳ ಹೆಜ್ಜೆಗಳಲ್ಲೆ
ಸದ್ದಿಲ್ಲದೆ ಸೇರುವ ಸಜ್ಜು..,
ದಣಿದ ದೇಹ, ಬಸಿದ ನೆತ್ತರ ಪಸೆ
ಹನಿ ಹನಿಯಾಗಿ
ತಂಪೂಡಿ ತಣಿಸಲು.,
ಎದೆಯೊಲುಮೆಯಲ್ಲಿ
ಅರಮನೆಯಂತ ಕಾವಲು
ಆಳಾಗಿ ದುಡಿದವರು,
ಬೊಗಸೆಯಲ್ಲಿ ಹಿಡಿದ ಕಾಳಜಿ
ಕಣ್ಣ ಕನಸುಗಳಲಿ..
ಕರುಳು ಅರಿಯುವ
ನೋವ ಕುರುಹುಗಳು.
ನಲುಗಿ ಕರಗಿ ಬಿಡುತ್ತವೆ,ನೋವುಂಡರೂ
ಸಹನೆಯೊಳಗೆ ನಗೆಯ ತೇಲಿಸಿ
ಮರೆಮಾಚಿಸುತ್ತವೆ..
ಒಲವ ಝರಿಯ ಧುಮ್ಮಿಕ್ಕಿಸಿ
ಮನವ ತಣಿಸುತ್ತವೆ.
ಹಸಿವ ತಣಿಸುವ ಕೈಗಳು
ಹಸಿವನ್ನುಂಡ ಉದರಗಳು..
ಮರುಗುವ ಕರುಳ ಹೊಸೆದ ಬತ್ತಿ
ಮಮತೆಯ ತೈಲದೊಳು
ತಾವುರಿದು, ನಮ್ಮ ಬದುಕಿಗೆ
ಬೆಳಕಾದವರು...
ಕತ್ತಲಿನ ಹಾದಿಯೊಳು ನಡೆದು.,
ನೋವಿನಿರುಳುಗಳಲ್ಲೂ
ಅಂಜದೇ ಬೆಳಕಿನ ಮಿಂಚು
ಹರಿಸುವ ಛಲದ ತಾಲೀಮುಗಳು
ನಮ್ಮ ಬದುಕ ಮುನ್ನಡಿಗಳು.,
ನೋವಿನಲೆಯೆದುರು ಕುಗ್ಗದೇ
ಈಜಿ ಸೇರುವ ದಡದಂತೆ
ಸಾರ್ಥಕ ಬದುಕು ಇವರದು..!
✍️ಸಿದ್ದು ಮೂರ್ತಿ.

Comments
Post a Comment