ಕವಿತೆ


 ಸ್ವಾತಂತ್ರ್ಯದ  ನೆರಳಿನಲ್ಲಿ..

----------------------------------



ಲೆಕ್ಕವಿಲ್ಲದಷ್ಟು ಜೀವಗಳು

ಚೆಲ್ಲಿದ ರಕ್ತ ತರ್ಪಣ

ತಬ್ಬಲಿಗಳ ಅಶ್ರುತರ್ಪಣ

ತ್ಯಾಗ ಬಲಿದಾನಗಳು

ಮಣ್ಣ ಕಣ ಕಣದಿ ಬೆರುತುಹೋಗಿವೆ..


ಅಂಜದೆದೆಯ ಗುಂಡಿಗೆಗಳು

ಗುಂಡಿನ ಸುರಿಮಳೆಗೆ ಎದೆಯೊಡ್ಡಿ

ಸಮರ್ಪಿಸುವ ಜೀವದಿ

ಕಣ ಕಣದ ದೇಶಾಭಿಮಾನ

ನೆತ್ತರ ಕಲೆಯ ನೆಲದಲ್ಲಿ ಅಚ್ಚಾಗಿವೆ.

ಹುತಾತ್ಮರ ಪವಿತ್ರ ಆತ್ಮ ಚರಿತ್ರೆಗಳು

ನಮ್ಮೀ ಸ್ವಾತಂತ್ರ್ಯದ ಮುಕ್ತ ನೆರಳು..


ನಮ್ಮದೀಗ ಯಾರ ಹಂಗಿಲ್ಲದ ಬದುಕು

ಎಗ್ಗಿಲ್ಲದೆ ಸಾಗಿದೆ,ಎಲ್ಲೆಯ ದಾಟಿ

ಚೆಲ್ಲುವ ನೆತ್ತರು ಈಗ 

ಕ್ರೌರ್ಯ ಕಾದಾಟದ ಅಚ್ಚು.

ಮಮಕಾರದ ಹುಚ್ಚು

ಅಸೂಯೆ ವೈಷಮ್ಯದ ಹುಟ್ಟು

ಗಲ್ಲಿ ಗಲ್ಲಿಗೂ,ಊರು ಕೇರಿಗೂ

ಗದ್ದುಗೆಯ ಪೀಠಕ್ಕೂ 

ಶಾಸನದ ಕರಾರುಗಳಿಗೂ ಅಂಟಿಕೊಂಡಿದೆ.

ಕಳಚಿಬಿದ್ದವು ಸಹಬಾಳ್ವೆಯ ಕೊಂಡಿ

ನಡುವೆ ಜಾತಿ ಅಂತರ ಇರಿಸಿ.

ಕೋಮುವಾದಗಳ ಮುಂದಿರಿಸಿ,

ನೀತಿ ಅಳಿದ ನೆಲವೀಗ

ಸ್ವಾತಂತ್ರ್ಯದ ನೆರಳಿನಲ್ಲಿ


ದಂಗೆಗಳು ಉಂಟು,ಹೋರಾಟಗಳೂ ಉಂಟು

ಅವರವರ ಹಂಗಿಗೆ,ಅವರದೇ ಒಳಿತಿಗೆ

ಎಲ್ಲದಕ್ಕೂ ಸ್ವಾತಂತ್ರ್ಯ,ಪ್ರಶ್ನಿಸುವ ಹಕ್ಕು

ಪಡೆಯುವ ಹುಮಸ್ಸಿನಲಿ, ತುಳಿದ ದಾರಿ

ಹುತಾತ್ಮರ ಹಾದಿಯಲ್ಲಿ ಇರಲಿಲ್ಲ..!


ಕ್ರೌರ್ಯದ ಕರಿನೆರಳ ಛಾಯೆಗಳು

ಹಗಲೇ ಸೊಕ್ಕಿನಲಿ ಉಂಡ ಸುಖದ ಸೂರೆಗೆ

ಮುದುಡಿ ಉದುರಿದ ಕುಸುಮಗಳ

ಬದುಕು ಬೆತ್ತಲಾಗಿತ್ತು.ಭವ್ಯ ಭಾರತದ

ಗಾಂಧಿ ಕಂಡ ಕನಸು ಭಗ್ನ ಗೊಂಡಿತ್ತು.

ನೀತಿ ಬೋಧೆಯ ತತ್ವ, ಹೊತ್ತಿಗೆಯಲ್ಲೇ

ಸಂವಿಧಾನದ ಆಶಯವೂ ಕರಗಿತಲ್ಲೇ..!!


ಉಳಿದ ಅನಾಥರೊಡಲ ಹಸಿವುಗಳು

ಬಳ್ಳಿಯಂತೆ ತೆಳ್ಳಗೆ ಹಬ್ಬಿದ ಮೆಲು ಹಾಸಿಗೆಗಳು

ಉಳ್ಳವರ, ತೇಗಿ ಸುಖ ನಿದಿರೆಗೆಂದೇ

ಹರಡಿಕೊಂಡಿವೆ,ಸಮಾನತೆಯ 

ಕನಸು ಕಂಡ ಕಂಗಳಲ್ಲಿ ಜಿನುಗಿದ ಹನಿಗಳು

ಸ್ವಾತಂತ್ರ್ಯದ ನೆರಳಿನಲ್ಲಿ ಮರೆಯಾಗಿವೆ.



✍️ ಸಿದ್ದುಮೂರ್ತಿ, ತುಮಕೂರು























Comments

Popular posts from this blog

ಆಧ್ಯಾತ್ಮಿಕ ವಿಚಾರ