ಬದುಕಾಗಿ ಉಳಿದಿಲ್ಲ
ಬದುಕಾಗಿ ಉಳಿದಿಲ್ಲ..!!
ಬದುಕಾಗಿ ಉಳಿದಿಲ್ಲ..!!
---------------------
ನಲುಗುವ ಹಸಿವುಗಳ ವೇದನೆಗೆ
ದನಿಗೂಡದ ವೇದಿಕೆಯ
ಸಂವೇದನೆ..!!!
ಬರಿ ಮಾತುಗಳು
ಕಣ್ಣೀರೊರೆಸೋ ತಂತ್ರಗಳು..!!!
ಅತಂತ್ರ ಬದುಕು
ನಂದಿ ಹೋಗುವ ಹೊತ್ತಿಗೆ
ಕಾಳಜಿಯ ಮನಸ್ಸು
ಮಿಂಚಿ ಹೋದ ಕಾಲಕ್ಕೆ.!!
ಎದೆಯ ಕನಸಿನ ಕೂಸು
ಹುಟ್ಟುವ ಮುನ್ನವೇ ಸತ್ತಿದೆ
ಕಂಗಳಲಿ ಹಾತೊರೆವ ಕನಸು
ಕಂಗಾಲಾಗಿದೆ..!!
ಹೆಗಲಿಗೊತ್ತು ನಡೆದ ಬದುಕಿನ
ಹಾದಿಯು ಮುಸುಕು
ಹೊಸಕಿ ಹಾಕುವ ಹುನ್ನಾರ
ಸುತ್ತಲಿರುವಾಗ
ಮುನ್ನೆಡುವ ದಿನಗಳೇ ಕಗ್ಗಂಟು.!!!
ದೇಹಕ್ಕೆ ಉಸಿರೇ ಭಾರವಾದಷ್ಟು
ಬದುಕು.!
ಬಸಿದ ಶ್ರಮದ ಬೆಲೆ
ಕೇಳದ ಅನಾಥ, ದಿಕ್ಕು ದೆಶೆ ಇಲ್ಲ
ಕೊನೆಗೂ
ದಕ್ಕಿದ್ದು ಮಾತ್ರ ಶೂನ್ಯ
ಮರೀಚಿಕೆಯ ಮಾನ್ಯ.!!
ಉಸಿರ ಬಿಗಿದ ಕೊರಳು,
ಇನ್ನೆಲ್ಲಿ ಜೀವ ಅರಳುವುದು
ಚಿಗುರದ ಕೊರಡುಗಳಂತೆ
ಅಳಿದು ಹೋಗುವ ಆತಂಕ
ಅರಿತು ಹಾರೈಕೆ ಮಾಡುವರಾರು..??
ಅರಿವಿಗೆ ಬಾರದ ವಾಸ್ತವ
ಅಂಗಾತ ಮಲಗಿದ ವ್ಯವಸ್ಥೆಗೆ
ವ್ಯವಸ್ಥಿತ ರೂಪ ಕೊಟ್ಟುಬಿಟ್ಟರು
ಆಸೆಗಳ ಹೊತ್ತ ಹೆಗಲು
ಗುಳೇ ಹೊರಟವು..,
ಕನಸೆಂಬ ಬದಲಾವಣೆ ಕಳೆದು ಹೋದವು...!!
ಕಂಡರೂ ಕಾಣದ
ಮನೋಸ್ಥಿತಿ ಉಲ್ಬಣ
ಕೇಳರಿಯದ ದಾರುಣ...!
ಉಳ್ಳವರ ಬೀಡು ಇದು,ಇರಗೊಡದು
ಬಿಟ್ಟು ಹೋಗಲು ಬಿಡದು
ಉಳಿದರೂ ಬದುಕು
ಬದುಕಾಗಿ ಉಳಿದಿಲ್ಲ...
✍️ ಸಿದ್ದು ಮೂರ್ತಿ

Comments
Post a Comment