ಆ ರಾತ್ರಿಯಲ್ಲಿ
ಆ ರಾತ್ರಿಯಲ್ಲಿ
ಸುತ್ತಲೂ ಹಚ್ಚ ಹಸಿರಿನ ತೋಟ ನಡುವೆ ರಾಮಜ್ಜ ನ ಮನೆ..,ಕೂಡು ಕುಟುಂಬ ಸುಂದರ ಸಂಸಾರ ...ರಾಮಜ್ಜನ ಮಗ ಸುರೇಶ ೫ ವರ್ಷಗಳಿಂದ ಭಾರತೀಯ ಸೈನ್ಯ ದಲ್ಲಿ ಸೇವೆಯಲ್ಲಿದ್ದಾನೆ..ಸುರೇಶನ ಹೆಂಡತಿ ಸಂಗೀತಾ ತನ್ನ ಇಬ್ಬರು ಮಕ್ಕಳೊಂದಿಗೆ ಗಂಡನ ದೇಶಸೇವೆಗೆ ಪ್ರೋತ್ಸಾಹಿಸುತ್ತಾ ಚಂದದ ಸಂಸಾರವನ್ನು ನಡೆಸುತ್ತಿದ್ದಾಳೆ...!
ಸುರೇಶ ನ ಅಜ್ಜಿ ರಂಗಜ್ಜಿಗೆ ಸುರೇಶನ ಮೇಲೆ ತುಂಬಾ ಪ್ರೀತಿ.. ದಿನವೂ ಸುರೇಶನ ಪೋಟೋವನ್ನು ನೋಡುತ್ತಾ ನೆನೆಸಿಕೊಳ್ಳುತ್ತಾ ಇರುತ್ತಾಳೆ... ಬಾಲ್ಯದಲ್ಲೇ ತಾಯಿ ಕಳೆದುಕೊಂಡ ಸುರೇಶ ಅಜ್ಜಿ ಯ ಆರೈಕೆಯಲ್ಲಿ ಬೆಳೆಯುತ್ತಾನೆ...ಅಜ್ಜಿಯ ನೀತಿ ಕಥೆ, ಧೈರ್ಯ,ಸಾಹಸ, ತ್ಯಾಗ ಬಲಿದಾನ ಕಥೆಗಳ ತಿರುಳು ಸುರೇಶನನ್ನು ಸೈನ್ಯಕ್ಕೆ ಸೇರಿಸಲು ಪ್ರೇರೇಪಿಸಿದವು..
ಅಜ್ಜಿಯು ಸುರೇಶನ ಮಕ್ಕಳೊಂದಿಗೆ ಕಾಲ ಕಳೆಯುತ್ತಾ ಅವರಲ್ಲೇ ಸುರೇಶನನ್ನು ಕಾಣುತ್ತಾ ಇರುತ್ತಾಳೆ..
ರಾಮಜ್ಜ ಹೊಲಮನೆಯ ತೋಟದ ಕೆಲಸಗಳಲ್ಲೇ ಮಗ್ನನಾಗಿರುತ್ತಾನೆ..
ಸಂಗೀತಾ ತನ್ನ ಗಂಡನ ನೆನಪಿನಲ್ಲೇ ನಿತ್ಯ ದಿನ ದೂಡುತ್ತಿರುತ್ತಾಳೆ..
ಅದೊಂದು ದಿನ ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿ ಗಳ ಚಿತ್ತಾರ,ತಳಿರು ತೋರಣಗಳಿಂದ ಸಿಂಗಾರಗೊಂಡಿದೆ....ಅಡಗೆಮನೆಯಿಂದ ಘಮ ಘಮಿಸುವ ಹೋಳಿಗೆ ಹೂರಣ,ಗರಿ ಗರಿ ಚಕ್ಕುಲಿ ಹಪ್ಳ ಹಬ್ಬದೂಟದ ಅಡುಗೆಮನೆ ತುಂಬಿ ತುಳುಕಿದೆ..
ಮನೆಯ ತಲೆಬಾಗಿಲ ಚಿಗುರು ಮಾವಿನ ತಳಿರು ತೋರಣ ಬಾಳೆಕಂದಿನ ಸ್ವಾಗತ ಚಂದದ ಅಲಂಕಾರಗಳು ಹಬ್ಬದ ಸಂಭ್ರಮ ವ ಉಂಟುಮಾಡಿದೆ....
ಓಡಿಬಂದ ಸುರೇಶನ ಮಗ ಚಂದ್ರು ತಾಯಿ ಸಂಗೀತಾಳ ಹತ್ತಿರ ಕೇಳ್ತಾ..."ಅಮ್ಮ ಇವತ್ತು ನಮ್ಮನೇಲಿ ಹಬ್ಬಾನಮ್ಮ..?ಯಾವ ಹಬ್ಬ ಅಮ್ಮ...?! ಅದಕ್ಕೆ ಸಂಗೀತಾ... ಹೌದು ಕಂದ ಈ ವತ್ತು ನಮ್ಮ ಮನೇಲಿ ಒಂದ್ ರೀತಿ ಹಬ್ಬವೇ...
ಈವತ್ತು ನಿಮ್ಮ ಅಪ್ಪನ ಹುಟ್ಟಿದ ಹಬ್ಬ ಕಂದ.. ಅದಕ್ಕೆ ಅಪ್ಪನ ಹುಟ್ಟಿದ ಹಬ್ಬ ಆಚರಿಸೋದಕ್ಕೆಈ ಎಲ್ಲಾ ಅಲಂಕಾರ ಅಡುಗೆ...
ಅದಕ್ಕೆ ಮಗ ...'ಅಪ್ಪ ಯಾವಾಗ ಬರ್ತಾರಮ್ಮ...
ನಮ್ಮನ್ನೆಲ್ಲ ಬಿಟ್ಟು ಅಪ್ಪ ಏನ್ ಮಾಡ್ತಿದ್ದಾರೆ.. ಅಪ್ಪ ಎಲ್ಲಿದ್ದಾರೆ..ಅಮ್ಮಾ ಎಂದು ಕೇಳುತ್ತಾನೆ...
ಕಂದ..,ನಿಮ್ಮಪ್ಪ ನಮ್ ದೇಶ ಕಾಯೋದಕ್ಕೆಹೋಗಿದ್ದಾರೆ..
ಕಂದ.. ನಿಮ್ಮಪ್ಪ ನಮ್ಮನ್ನ ದೇಶನಾ ಕಾಯೋ ವೀರನಪ್ಪ ನಿಮ್ಮಪ್ಪ....
ಹೌದಾ ಅಮ್ಮ..!!!! ಹಾಗಾದರೆ ನಾನು ಅಪ್ಪಂತರ ದೇಶ ಕಾಯೋ ವೀರ ಆಗ್ತೀನಿ.... ಅಮ್ಮಾ..
ಮಗನ ಮಾತು ಕೇಳಿದ ಸಂಗೀತ ಕಣ್ಣಾಲಿ ತುಂಬಿ ದನಿಯು ಸಣ್ಣದಾಗಿ' ಆಯ್ತು ಕಂದ'ಎನ್ನುತ್ತಾಳೆ...
ಅಷ್ಟರಲ್ಲಿ ಒಳಗಿಂದ ಫೋನ್ ಕರೆಯ ಶಬ್ದ. ...ಒಳನಡೆದ ಸಂಗೀತಾ ಫೋನ್ ಕೈಗೆತ್ತಿಕೊಂಡು ಮಾತನಾಡುತ್ತಾಳೆ..
"ಆಕಾಶವೆ ಕಳಚಿ ಬಿದ್ದಂತ ಆಘಾತ ಸುದ್ದಿ "ಫೋನ್ ಹಿಡಿದು ಜೋರಾಗಿ "ಮಾವಯ್ಯ" ಎಂದುಕೂಗಿಕೊಂಡು ಕುಸಿದು ಬೀಳುತ್ತಾಳೆ..ರಾಮಜ್ಜ ಓಡಿಬಂದು ವಿಷಯ ಕೇಳಿದಾಗ "ಸುರೇಶನು ಭಯೋತ್ಪಾದಕರ ಗುಂಡಿಗೆ ಬಲಿಯಾದ ವಿಷಯ., ಕ್ಷಣ ಎದೆ ಬಡಿತ ಜೋರಾಗಿ ನಿತ್ರಾಣನಾಗುತ್ತಾನೆ ... ದೊಡ್ಡದೊಂದು ಬಿರುಗಾಳಿ ಬೀಸಿ ಮನೆಯ ಮುಂದಿನ ಅಂದದ ರಂಗೋಲಿ ತಳಿರು ತೋರಣಗಳೆಲ್ಲ. ಹಾರಿ ಬರಡು ಅಂಗಳ ಮಾಡಿದಾಯ್ತು..
ಮನೆಯ ಮೇಲ್ಚಾವಣಿ ಯೇ ಕುಸಿದು ದೊಪ್ಪೆಂದು ಬೀಳುವ ಶಬ್ದಕ್ಕೆ..ಬಿಚ್ಚಿ.ಚೀರುತ್ತಾ., ನಿದ್ರೆಯಿಂದೆದ್ದ ಸಂಗೀತಾ ತುಂಬಾ ಬೆವರಿ ಬೆದರಿ ಬೆಂಡಾಗಿದ್ದಾಳೆ...
ಅಷ್ಟಕ್ಕೂ ಅವಳ ಆ ಕೆಟ್ಟ ಕನಸು ಕನಸಾಗಿಯೇ ಉಳಿಯಲೆಂದು ಹಾಸಿಗೆಯಿಂದ ಎದ್ದು ದೇವರ ಮುಂದೆ ದೀಪ ಹಚ್ಚಿ ಬೇಡಿಕೊಳ್ಳುತ್ತಾಳೆ...
ಸಿದ್ದು ಮೂರ್ತಿ, ತುಮಕೂರು.
...
Comments
Post a Comment